ಫಿಶರ್, ಹ್ಯಾನ್ಸ್
 	1881-1945. ಜರ್ಮನ್ ರಸಾಯನವಿಜ್ಞಾನಿ. ಜರ್ಮನಿಯ ಹಾಶ್ಚ್-ಅಮ್-ಮೇನ್‍ನಲ್ಲಿ 1881 ಜುಲೈ 27ರಂದು ಜನನ. ರಸಾಯನವಿಜ್ಞಾನ ಅಭ್ಯಸಿಸಿ ಮಾರ್ಬರ್ಗ್ ವಿಶ್ವವಿದ್ಯಾಲಯದಿಂದ 1904ರಲ್ಲಿ ಡಾಕ್ಟೊರೇಟ್‍ಗಳಿಸಿ ತರುವಾಯ ವೈದ್ಯವಿಜ್ಞಾನಾಧ್ಯಯನ ಮಾಡಿ, ಮ್ಯೂನಿಕ್ ವಿಶ್ವವಿದ್ಯಾಲಯದಿಂದ 1908ರಲ್ಲಿ ಎಂ.ಡಿ. ಡಿಗ್ರಿ ಪಡೆದ. ರಕ್ತಕ್ಕೆ ಕೆಂಬಣ್ಣವೀಯುವ ಹೇಮೊಗ್ಲೊಬಿನ್ನಿನ ಅಂಶವಾಗಿರುವ, ಸ್ವಭಾವತಃ ಅಮೈನೋ ಆಮ್ಲವಾಗಿಲ್ಲದಿರುವ, ಹೀಮ್ ಎಂಬದ್ರವ್ಯದ ರಾಸಾಯನಿಕ ಸ್ವಭಾವವನ್ನು, 1921ರಲ್ಲಿ, ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಗಣ್ಯಸ್ಥಾನ ಪಡೆದ ಮೇಲೆ ಈತ ಅಭ್ಯಸಿಸತೊಡಗಿದ. ವಿದ್ಯಾರ್ಥಿಗಳ ನೆರವಿನಿಂದ ಸಾವಕಾಶವಾಗಿಯೂ ಶ್ರಮಸಹಿತವಾಗಿಯೂ ನಡೆಸಲಾದ ಈ ಸಂಶೋಧನೆಯಿಂದ ಹೀಮ್ ಎಂಬುದು ಪ್ರತಿಯೊಂದರಲ್ಲಿಯೂ ನಾಲ್ಕು ಇಂಗಾಲ ಪರಮಾಣುಗಳು ಮತ್ತು ಒಂದು ನೈಟ್ರೊಜನ್ ಪರಮಾಣು ಇರುವ ನಾಲ್ಕು ಪೈರೋಲ್ ಉಂಗುರಗಳಿಂದಾಗಿದೆ ಮತ್ತು ಈ ಉಂಗುರಗಳು ದೊಡ್ಡದಾದ ಉಂಗುರದಲ್ಲಿ ಅಳವಡಿಕೆಗೊಂಡಿವೆ ಎಂದು ತಿಳಿದುಬಂತು. 1929ರ ವೇಳೆಗೆ ಈತ ಹೀಮ್ ಅಣುವಿನ ಸಮಸ್ತ ವಿವರಗಳನ್ನು ಪರಿಶೋಧಿಸಿ ಮುಗಿಸಿದ್ದ. ಈ ಸಿದ್ಧಿಯನ್ನು ಗಮನಿಸಿ ಈತನಿಗೆ 1930ರ ನೊಬೆಲ್ ಪಾರಿತೋಷಿಕವನ್ನು ಪ್ರದಾನಿಸಿ ಗೌರವಿಸಲಾಯಿತು.

	ಪ್ರಾಣಿಪ್ರಪಂಚದ ಹೀಮ್ ಅಣುವಿಗೆ ಸಸ್ಯ ಪ್ರಪಂಚದಲ್ಲಿ ಪತ್ರಹರಿತ್ತು (ಕ್ಲೋರೊಫಿಲ್) ಸಂವಾದಿ ಎಂಬುದನ್ನು ಕಂಡುಕೊಂಡ ಫಿಶರ್ ರಚನೆಯನ್ನು ಶೋಧಿಸಲು ಉದ್ಯುಕ್ತನಾದ. 1930ರ ವೇಳೆಗೆ ಈ ಪರಿಶೋಧನೆಯಲ್ಲಿಯೂ(ಪತ್ರ ಹರಿತ್ತಿನ ಸಂಪೂರ್ಣ ರಚನೆಯ ಆವಿಷ್ಕಾರ(ಆತ ಯಶಸ್ವಿಯಾದ.

	ಎರಡನೆಯ ಮಹಾಯುದ್ಧದಲ್ಲಿ ಫಿಶರನ ಪ್ರಯೋಗಮಂದಿರ ಬಾಂಬ್ ತಾಡೆನೆಗಳಿಂದ ನಾಶವಾಯಿತು. ಜರ್ಮನಿ ಪೂರ್ಣ ಶರಣಾಗತಿಗೆ ಒಪ್ಪುವ ಮೊದಲೇ, 1945 ಮಾರ್ಚ್ 31ರಂದು, ಈತ ಆತ್ಮಹತ್ಯೆ ಮಾಡಿಕೊಂಡು ಅಸು ನೀಗಿದ.					
	(ಆರ್.ಎಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ